ಕಾಮವಿಕಾರಗಳು

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ

 ಗಂಡು ಹೆಣ್ಣುಗಳಲ್ಲಿ ಇರಬೇಕಾದ ಸಹಜಕಾಮ ಪ್ರವೃತ್ತಿಗೆ ವಿರುದ್ಧವಾದ ವಿಕೃತಕಾಮ ಪ್ರವೃತ್ತಿಗಳನ್ನು ಈ ಹೆಸರಿನಿಂದ ಕರೆಯಲಾಗಿದೆ (ಸೆಕ್ಷುಅಲ್ ಡಿಸಾರ್ಡರ್ಸ್). ಕಾಮವಿಕಾರಗಳು ಇತರ ಮಾನಸಿಕ ಮತ್ತು ದೈಹಿಕ ವಿಕಾರಗಳಂತೆಯೇ ಮಾನವ ಹುಟ್ಟಿದಂದಿನಿಂದ ಅವನನ್ನು ಕಾಡಿಸಿವೆ ಎಂದು ಭಾವಿಸಲು ಸಾಕಷ್ಟು ಕಾರಣಗಳಿರುವುವಾದರೂ ಇವುಗಳ ವೈಜ್ಞಾನಿಕ ಅಧ್ಯಯನ ಇತ್ತೀಚಿನದು. ವಾಸ್ತವವಾಗಿ, ಕಾಮವರ್ತನೆ ಮತ್ತು ಕಾಮವಿಕಾರದ ಮೇಲಿನ ಸಂಶೋಧನೆಗಳು ಈ ಶತಮಾನದಲ್ಲಿ ನಿಖರವಾಗಿದೆ. ಕಾಮವಿಕಾರದ ವೈಜ್ಞಾನಿಕ ಅಧ್ಯಯನದ ಪ್ರಾರಂಭವೇ ತಡವಾದದ್ದಲ್ಲದೆ ಈ ಕ್ಷೇತ್ರದಲ್ಲಿ ಪ್ರಗತಿಯೂ ಕುಂಠಿತವಾಗಿರುವುದಕ್ಕೆ ಅನೇಕ ಕಾರಣಗಳಿವೆ. ಇವುಗಳಲ್ಲಿ ಮುಖ್ಯವಾದದ್ದೆಂದರೆ ಹೆಚ್ಚು ಕಡಿಮೆ ಎಲ್ಲ ಸಮಾಜಗಳೂ ಅಲ್ಲಿಂದಿಲ್ಲಿಗೂ ಕಾಮವೆಂಬುದು ಖಾಸಗಿಯಾದ, ಮುಚ್ಚುಮರೆ ಮಾಡಿಕೊಳ್ಳಬೇಕಾದ, ವೈಜ್ಞಾನಿಕ ಪರೀಕ್ಷೆಗೆ ಒಳಪಡಿಸಬಾರದಾದ ವೈಯಕ್ತಿಕ ವ್ಯಾಪಾರವೆಂದು ಪರಿಗಣಿಸಿದ್ದೇ ಆಗಿದೆ. ಜೊತೆಗೆ ಈ ಕ್ಷೇತ್ರದಲ್ಲಿ ಅಧ್ಯಯನಕ್ಕಿಳಿದವರು ಜನರ ಟೀಕೆಗೆ ಗುರಿಯಾಗುತ್ತಿದ್ದುದೂ ಒಂದು ಕಾರಣ. ಹಾಗೆ ನೋಡಿದರೆ ಮನುಷ್ಯನ ಕಾಮ ಜೀವನದ ವೈಜ್ಞಾನಿಕ ವಿಶ್ಲೇಷಣೆ ಭಾರತದಲ್ಲಿ ಬಲು ಪ್ರಾಚೀನ ಕಾಲದಿಂದಲೂ ನಡೆದುಬಂದಿದೆ. ವಾತ್ಸ್ಯಾಯನನಂಥ ಮಹರ್ಷಿಗಳು ಕಾಮದ ಬಗ್ಗೆ ವಸ್ತುನಿಷ್ಠವಾಗಿ ಬರೆದು ಈ ವಿಷಯದ ಮೇಲಿನ ಚಿಂತನೆಗೆ ಘನತೆಯನ್ನು ತಂದುಕೊಟ್ಟಿದ್ದರು. (ನೋಡಿ- ಕಾಮಶಾಸ್ತ್ರ) ಇಂಥ ಬರೆಹಗಳು ಮತ್ತು ಶತಮಾನಗಳಿಂದ ಭಾರತದಲ್ಲಿ ಉಳಿದು ಬಂದಿರುವ ವಾಸ್ತುಶಿಲ್ಪ ಕೃತಿಗಳು ಬಹುಶಃ ಪ್ರಾಚೀನ ಭಾರತದಲ್ಲಿ ಕಾಮದ ಬಗ್ಗೆ ಹೆಚ್ಚು ತೆರೆದ ಮನಸ್ಸಿನ, ಆರೋಗ್ಯಕರವಾದ ಧೋರಣೆ ಇತ್ತೆಂಬುದನ್ನು ಸೂಚಿಸುತ್ತವೆ. ಆದರೆ ಪ್ರಾಚೀನ ಬರೆಹಗಳಲ್ಲಿ ಕಾಮ ವಿಕಾರಗಳಿಗಿಂತ ಅದರ ಸಹಜ ಅಭಿವ್ಯಕ್ತಿಗೆ ಹೆಚ್ಚಿನ ಗಮನವನ್ನು ಕೊಡಲಾಗಿದೆ. ಆದ್ದರಿಂದ ಇಲ್ಲಿ ಆಧುನಿಕ ಮನೋವಿಜ್ಞಾನಿಗಳು ಮತ್ತು ಮನೋವೈದ್ಯರು ಮಾಡಿದ ಅಧ್ಯಯನಗಳನ್ನನುಸರಿಸಿ ಕಾಮವಿಕಾರದ ವಿವರಣೆ ಮತ್ತು ವರ್ಣನೆಯನ್ನು ಕೊಡಲಾಗಿದೆ.

 ಕಾಮವಿಕಾರಗಳೆಂದರೇನು ಎಂಬ ಪ್ರಶ್ನೆಗೆ ಎಲ್ಲ ಕಾಲಕ್ಕೂ ಎಲ್ಲ ಸಮಾಜಕ್ಕೂ ಒಪ್ಪಿಗೆಯಾಗುವಂಥ ಒಂದೇ ಒಂದು ಉತ್ತರವನ್ನು ಕೊಡುವುದು ಕಷ್ಟ. ಏಕೆಂದರೆ ಕಾಮವಿಕಾರದ ನಿರೂಪಣೆ ಸಹಜಕಾದ ನಿರೂಪಣೆಯನ್ನು ಅವಲಂಬಿಸುತ್ತದೆ. ಒಂದು ಕಾಲದಲ್ಲಿ ವಿಕೃತಿ ಕಾಮವೆನಿಸಿಕೊಂಡದ್ದು ಅನಂತರ ಸಹಜಕಾಮವೆಂದು ಪರಿಗಣಿಸಲ್ಪಟ್ಟಿರಬಹುದು. ಉದಾಹರಣೆಗೆ ಮುಷ್ಟಿಮೈಥುನ. ಒಂದು ಸಮಾಜದಲ್ಲಿ ವಿಕೃತವೆನಿಸಿಕೊಂಡದ್ದು ಇನ್ನೊಂದು ಸಮಾಜದಲ್ಲಿ ಸಹಜವಾಗಿರಬಹುದು. ಈ ರೀತಿ ಸಾಮಾಜಿಕ ಧೋರಣೆಗಳು ಬದಲಾದಂತೆ ಕಾಮವಿಕಾರಗಳ ವ್ಯಾಖ್ಯೆಯಲ್ಲೂ ಬದಲಾವಣೆಗಳಾಗಲೇ ಬೇಕಾಗುತ್ತದೆ. ಇಂಗ್ಲೆಂಡಿನಲ್ಲಿ ಸಲಿಂಗಕಾಮಿಗಳನ್ನು ಸಹನೆಯಿಂದ ಕಾಣಬೇಕೆಂಬ. ಅಂಥವರು ವಿಕೃತರೆಂದು ಪರಿಗಣಿಸಬೇಕಾದ ಆವಶ್ಯಕತೆ ಇಲ್ಲವೆಂಬ ಧೋರಣೆ ಇತ್ತೀಚೆಗೆ ರೂಪುತಳೆಯುತ್ತಿರುವುದು ಈ ಎರಡನೆಯ ಅಂಶದ ನಿದರ್ಶನವಾಗಿದೆ. ಅಲ್ಲದೆ ಕೆಲವು ಸಮಾಜದಲ್ಲಿ, ಚಿಂತಕರಲ್ಲಿ ಮತ್ತು ಮತಧರ್ಮಗಳಲ್ಲಿ ಕಾಮವೆಂಬುದು ಸಂತಾನಾಭಿವೃದ್ಧಿಗೆ ಸಾಧಕವಾದಾಗ ಮಾತ್ರ ಮತಧರ್ಮಗಳಲ್ಲಿ ಕಾಮವೆಂಬುದು ಸಂತಾನಾಪೇಕ್ಷೆ ಇಲ್ಲದ ಲೈಂಗಿಕ ಚಟುವಟಿಕಗಳು ಅಸಹಜ-ಎಂಬ ಧೋರಣೆಯನ್ನು ಕೂಡ ಕಾಣಬಹುದು. ಈ ದೃಷ್ಟಿಯಿಂದ ಮುಷ್ಟಿಮೈಥುನ ಮತ್ತು ಸಂತಾನ ನಿರೋಧಕಗಳನ್ನೊಳಗೊಂಡ ಸಹಜ ಸಂಭೋಗ ಕೂಡ ವಿಕೃತವಾಗುತ್ತದೆ. ಆದರೆ ಆಧುನಿಕ ವಿಜ್ಞಾನ ಇದನ್ನು ತೀರ ಸಂಕುಚಿತವಾದ, ವಾಸ್ತವಿಕತೆಗೆ ದೂರವಾದ, ದೃಷ್ಟಿಕೋನವೆಂದು ತಳ್ಳಿಹಾಕಿದೆ. ಕಾಮದ ಅಂತಿಮ ಗುರಿ ಸಂತಾನಾಭಿವುದ್ಧಿ ಎಂಬುದು ನಿಜವಾದರೂ ವಾಸ್ತವಿಕವಾಗಿ ಇದು ಎಂದೂ ಅಷ್ಟಕ್ಕೆ ಸೀಮಿತವಾಗಿರುವುದಿಲ್ಲ-ಎಂಬುದು ಸತ್ಯಕ್ಕೆ ಹತ್ತಿರವಾದ ಹೇಳಿಕೆಯಾಗಿದೆ. ಇದು ಹಾಗಿರಬೇಕೇ ಬೇಡವೇ ಎಂಬುದು ಬೇರೆಯೇ ಆದ ಪ್ರಶ್ನೆಯಾಗುತ್ತದೆ. ಅಲ್ಲದೆ ಎಲ್ಲರಲ್ಲೂ ಕಾಮ ವ್ಯಕ್ತವಾಗುವ ಬಗೆಯೇ ಸಂತಾನಾಭಿವೃದ್ಧಿಗೆ ಸೀಮಿತವಾಗಿಲ್ಲದಿದ್ದಾಗ ಅದು ಹಾಗಿರಬಾರದಿತ್ತು ಎಂಬುದೂ ವೈಜ್ಞಾನಿಕವಲ್ಲದ ಹೇಳಿಕೆಯಾಗುತ್ತದೆ. ಸಾಮಾನ್ಯವಾಗಿ ಸಮಾಜ ಮತ್ತು ಕಾನೂನು ಅಂಗೀಕರಿಸದ ಮತ್ತು ವ್ಯಕ್ತಿ ಸಹಜವಾಗಿ ಸಮಾಜಕ್ಕೆ ಹೊಂದಿಕೊಳ್ಳಲಾಗುವಂತೆ ಅಡಚಣೆಯನ್ನೊಡ್ಡುವ ಕಾಮ ಪ್ರವೃತ್ತಿಗಳು ವಿಕಾರವಾದವೆಂದು ಪರಿಗಣಿಸಬಹುದು. ವೈಜ್ಞಾನಿಕ ಅಧ್ಯಯನಗಳು ಹೆಚ್ಚಾದಂತೆ ಸ್ಪಷ್ಟವಾಗಿರುವ ಅಂಶವೆಂದರೆ ಮುಷ್ಟಿಮೈಥುನ, ನಿದ್ರಾಸ್ಖಲನಾದಿಗಳು ಅತ್ಯಂತ ಸಾಮಾನ್ಯವೂ ಸಹಜವೂ ಆದವೆಂಬುದಾಗಿದೆ. ಮೂಲತಃ ಮನೋರೋಗಿಗಳಾದವರಲ್ಲಿ ಮುಷ್ಟಿಮೈಥುನ ಒಮ್ಮೊಮ್ಮೆ ವಿಕೃತ ಸ್ವರೂಪಕ್ಕೆ ಹೋಗಬಹುದಾದರೂ ಸಾಮಾನ್ಯವಾಗಿ ಇದೊಂದು ಸಮಸ್ಯೆಯಾಗಿರುವುದಿಲ್ಲ. ಆದರೆ ತಾರುಣ್ಯಕ್ಕೇರುತ್ತಿರುವ ಹುಡುಗರಲ್ಲಿ ಅಜ್ಞಾನದಿಂದಾಗಿ ಕೆಲವೊಮ್ಮೆ ಮಾನಸಿಕ ತೊಂದರೆಗಳು ತಲೆದೋರುವುದು ಸಾಧ್ಯವಿದೆ. ಮುಷ್ಟಿಮೈಥುನ ಮತ್ತು ನಿದ್ರಾಸ್ಖಲನ ಅತ್ಯಂತ ಕೆಟ್ಟದ್ದು. ಇವುಗಳಿಂದ ಮಾನಸಿಕ ಮತ್ತು ದೈಹಿಕ ಆರೋಗ್ಯ ಪೂರ್ತಿಯಾಗಿ ಕೆಟ್ಟು ಹೋಗುತ್ತದೆ - ಎಂದು ನಂಬಿಕೊಂಡಿರುವವರು ಅನಾವಶ್ಯಕವಾದ ಚಿಂತೆ, ತಳಮಳ, ಖಿನ್ನತೆ, ಆಯಾಸ, ಮತ್ತು ನೂರೆಂಟು ಕಾಲ್ಪನಿಕ ಬಾಧನೆಗಳಿಂದ ನರಳುತ್ತಾರೆ. ಭಾರತದ ತರುಣರಲ್ಲಿ ಇದನ್ನು ಸಾಧಾರಣವಾಗಿ ಕಾಣಬಹುದು. ಆದರೆ ಈ ಬಾಧೆಗಳು ಮುಷ್ಟಿಮೈಥುನ ಅಥವಾ ನಿದ್ರಾಸ್ಖಲನದ ನೇರ ಪರಿಣಾಮಗಳಲ್ಲ ; ಅವುಗಳ ಬಗ್ಗೆ ವ್ಯಕ್ತಿ ಹಚ್ಚಿಕೊಂಡ ಚಿಂತೆಯ ಪರಿಣಾಮಗಳು ಅಷ್ಟೆ. ಇಂಥ ವ್ಯಕ್ತಿಗಳಿಗೆ ಶರೀರ ರಚನೆಯ ಸ್ಥೂಲಪರಿಚಯ ನೀಡಿ ಹೇಗೆ ಈ ತೊಂದರೆಗಳು ಎಲ್ಲರಲ್ಲೂ ಕಂಡುಬರುವ ಸಹಜವೂ ಸಾಮಾನ್ಯವೂ ಆದ ಶಾರೀರಿಕ ಪ್ರತಿಕ್ರಿಯೆಗಳು-ಎಂಬುದನ್ನು ವಿವರಿಸುವುದರಿಂದ, ಮತ್ತು ಅವುಗಳಿಂದ ಆಗಬಹುದಾದ ಕೆಡುಕಿನ ವ್ಯಾಪ್ತಿಯನ್ನು ವಿವರಿಸುವುದರಿಂದ ಅವರ ಚಿಂತೆಯನ್ನು ನಿವಾರಿಸಬಹುದು.

 ನಿಜವಾಗಿಯೂ ವಿಕೃತವೆನ್ನಬಹುದಾದ ಕಾಮಪ್ರವೃತ್ತಿಗಳಲ್ಲಿ ಈ ಕೆಲವು ಮುಖ್ಯ ನಮೂನೆಗಳನ್ನು ಗುರುತಿಸಲಾಗಿದೆ ; ಆಪಿರದಿಕೆ (ಇಂಪೋಟೆನ್ಸ್) ಮತ್ತು ಉದ್ರೇಕ ರಾಹಿತ್ಯ (ಫ್ರಿಜಿಡಿಟಿ), ಸಲಿಂಗಕಾಮ (ಹೋಮೊಸೆಕ್ಷುಯಾಲಿಟಿ), ಕದ್ದು ನೋಡುವಿಕೆ (ವಾಯುರಿಸಮ್), ಪ್ರದರ್ಶನಾತಿರೇಕ (ಎಕ್ಸಿಬಿಷನಿಸಮ್), ವಸ್ತುಕಾಮ (ಫೆಟಿಷಿಸಮ್), ಬದಲುಡಿಗೆ (ಟ್ರಾನ್ಸ್ ವೆಸ್ಟಿಸಮ್) ಮತ್ತು ಸ್ವಹಿಂಸಕಾಮ (ಮ್ಯಾಸೊಕಿಸಮ್) ಮತ್ತು ಪರಹಿಂಸಕಾಮ (ಸಾಡಿಸಮ್).

 1 ಆಪಿರದಿಕೆ ಮತ್ತು ಉದ್ರೇಕರಾಹಿತ್ಯ : ಇವೆರಡೂ ಗಂಡು ಮತ್ತು ಹೆಣ್ಣಿನ ಕಾಮಜೀವನದಲ್ಲಾಗುವ ಅಸ್ತವ್ಯಸ್ತತೆಗಳೇ ಹೊರತು ಕಾಮದ ವಿಕೃತಾಭಿವ್ಯಕ್ತಿಗಳಲ್ಲ. ಆಪಿರದಿಕೆ ಗಂಡಸರಲ್ಲಿ ಮತ್ತು ಉದ್ರೇಕರಾಹಿತ್ಯ ಹೆಂಗಸರಲ್ಲಿ ಕಂಡುಬರುವ ತಾರುಮಾರುಗಳು. ಆದರೆ ಇವೆರಡರ ಮೂಲ ಬಹುಶಃ ಒಂದೇ ಎಂದು ಭಾವಿಸಲು ಸಾಕಷ್ಟು ಕಾರಣಗಳಿವೆ. ಲೈಂಗಿಕ ಕ್ರಿಯೆಯಲ್ಲಿ ತೊಡಗಿದ ಹೊತ್ತಿಗೆ ಗಂಡಸರ ಜನನೇಂದ್ರಿಯದ ಪಟುತ್ವ ಥಟ್ಟನೆ ಇಳಿದು ಹೋಗುವುದೇ ಆಪಿರದಿಕೆ. ಪರಿಣಾಮವಾಗಿ ಸಂಭೋಗಕ್ರಿಯೆಯನ್ನು ಪೂರೈಸುವುದು ಆತನಿಗೆ ಸಾಧ್ಯವಾಗುವುದಿಲ್ಲ. ಹೆಂಗಸರಲ್ಲಿ ಇದು ಒಟ್ಟಿನಲ್ಲಿ ಸಂಭೋಗಕ್ಕೆ ಸಿದ್ಧವಾಗದ ಸ್ವರೂಪವನ್ನು ಪಡೆಯುತ್ತದೆ. ಯುಕ್ತ ಉದ್ರೇಕರಾಹಿತ್ಯದಿಂದಾಗಿ ಜನನೇಂದ್ರಿಯ ಮತ್ತು ಒಟ್ಟು ಶರೀರಬಿಗಿದುಕೊಂಡು ಹೆಂಗಸಿಗೆ ಲೈಂಗಿಕ ಕ್ರಿಯೆ ತಾಪದಾಯವೆನಿಸುತ್ತದೆ.

 ಮುದಿವಯಸ್ಸಿನಲ್ಲಿ ಬಹುಪಾಲು ಗಂಡಸರು ಮತ್ತು ಹೆಂಗಸರಲ್ಲಿ ಆಪಿರದಿಕೆ ಮತ್ತು ಉದ್ರೇಕರಾಹಿತ್ಯ ಸಾಮಾನ್ಯ. ಆಗ ಇವು ಕಾಮವಿಕಾರಗಳೆನಿಸುವುದಿಲ್ಲ. ತರುಣ ತರುಣಿಯಲ್ಲಿ ವiತ್ತು ಪ್ರಬುದ್ಧರಲ್ಲಿ ಕಂಡುಬಂದಾಗ ಮಾತ್ರ ಇವು ಸಮಸ್ಯೆಗಳಾಗುತ್ತವೆ. ಹಾಗೂ ಅವರಲ್ಲೂ ತುಂಬ ಬಳಲಿದಾಗ, ಯಾವುದೋ ಚಿಂತೆಯಲ್ಲಿರುವಾಗ ಅಪೂರ್ವವಾಗಿ ಈ ಪ್ರತಿಕ್ರಿಯೆಗಳು ಕಂಡು ಬಂದಲ್ಲಿ ಅವುಗಳ ಬಗ್ಗೆ ಗಮನಕೊಡಬೇಕಾಗಿಲ್ಲ. ಆದರೆ ಆಪಿರದಿಕೆ ಮತ್ತು ಉದ್ರೇಕರಾಹಿತ್ಯಗಳು ರೂಢಿಯಾದಾಗ ಮಾತ್ರ ತಜ್ಞರ ನೆರವನ್ನು ಪಡೆಯಬೇಕಾಗುತ್ತದೆ. ಈ ಎರಡೂ ತಾರುಮಾರುಗಳ ಮೂಲ ತೀವ್ರವಾದ ಉದ್ವಿಗ್ನತೆ (ಆಂಕ್ಸೈಟಿ) ಎಂಬುದನ್ನು ಹಲವು ತಜ್ಞರು ಒಪ್ಪುತ್ತಾರೆ. ಉದ್ವಿಗ್ನತೆಯ ಜೊತೆಗೆ ಸೇರಬಹುದಾದ ಅಥವಾ ಅದನ್ನು ಹೆಚ್ಚಿಸಬಹುದಾದ ಇನ್ನಿತರ ಕಾರಣಗಳೆಂದರೆ ಲೈಂಗಿಕ ಕ್ರಿಯೆಯ ಬಗೆಗೇ ಇರಬಹುದಾದ ಭಯ; ಬಸಿರಾಗುವ ಹೆದರಿಕೆ, ಗಂಡನಲ್ಲಿ ಹೆಂಡತಿಯ ಮೇಲೆ ಅಥವಾ ಹೆಂಡತಿಯಲ್ಲಿ ಗಂಡನ ಮೇಲೆ ಇರಬಹುದಾದ ನುಂಗಿಕೊಂಡ, ಕೋಪ, ಜುಗುಪ್ಸೆ ಕೆಲವೊಮ್ಮೆ ಕೇವಲ ಅತಿಯಾದ ಉದ್ರಿಕ್ತತೆ - ಈ ಮೊದಲಾದುವು. ಈ ರೀತಿಯ ಭಾಚಪ್ರತಿಕ್ರಿಯೆಗಳೆಲ್ಲ ಸಂಭೋಗದ ಸಮಯದಲ್ಲಿ ಗಂಡು ಹೆಣ್ಣಿನ ಸಾಮಥ್ರ್ಯವನ್ನು ಕುಂದಿಸಬಹುದು. ಇವುಗಳಲ್ಲದೆ ಮೊದಲಿನಿಂದಲೂ ಲೈಂಗಿಕತೆಯ ಬಗ್ಗೆ ಅತಿಕ್ರೂರವಾದ ಶಿಸ್ತಿನ ತರಬೇತಿಗೆ ಒಳಗಾಗಿರುವುದು ಮತ್ತು ಅಸಾಧಾರಣವಾದ ತಪ್ಪು ಕಲ್ಪನೆಗಳನ್ನು ಹೊಂದಿರುವುದೂ ಲೈಂಗಿಕ ಚಟುವಟಿಕೆಯಲ್ಲಿ ವ್ಯಕ್ತಿ ಸಹಜವಾಗಿ ತೊಡಗದಂತೆ ಮಾಡಬಹುದು. ಒಂದೆರಡು ಸಾರಿ ಇವುಗಳಲ್ಲಿ ಒಂದು, ಎರಡು ಅಥವಾ ಹಲವು ಕಾರಣಗಳಿಂದಾಗಿ ವ್ಯಕ್ತಿ ಲೈಂಗಿಕ ಕ್ರಿಯೆಯಲ್ಲಿ ಸೋತರೆ ಈ ಸೋಲೇ ಇನ್ನಷ್ಟು ಭಯ, ಉದ್ವಿಗ್ನತೆಯನ್ನು ಪ್ರೇರೇಪಿಸಬಹುದು. ಪರಿಣಾಮವಾಗಿ ಲೈಂಗಿಕ ಸನ್ನಿವೇಶಗಳಲ್ಲೆಲ್ಲ ಉದ್ವಿಗ್ನತೆ ಕಂಡುಬಂದು ಎಂದಿಗೂ ಸಂಭೋಗ ಸಾಧ್ಯವಾಗದಂತಾಗುತ್ತದೆ.

 ಯಾರೊಬ್ಬರಿಗೆ ಸಮಸ್ಯೆ ಇದ್ದರೂ ಗಂಡ ಮತ್ತು ಹೆಂಡತಿ ಇಬ್ಬರ ಸಹಕಾರ ಮತ್ತು ಅನುಮತಿಯಿಂದ ಇಬ್ಬರಿಗೂ ಚಿಕಿತ್ಸೆ ಆಗಬೇಕಾಗುತ್ತದೆ. ಮಾನಸಿಕ ಚಿಕಿತ್ಸಾ ವಿಧಾನಗಳಿಂದ, ಅದರಲ್ಲೂ ವರ್ತನ ಚಿಕಿತ್ಸೆಯ ವಿಧಾನಗಳಿಂದ ಇತ್ತೀಚೆಗೆ ಈ ತಾರುಮಾರುಗಳನ್ನು ನಿವಾರಿಸಲು ಸಾಧ್ಯವೆಂಬುದು ಗೊತ್ತಾಗಿದೆ. ಮುಖ್ಯವಾಗಿ ಉದ್ವಿಗ್ನತೆಯನ್ನು ಹೋಗಲಾಡಿಸುವುದರಿಂದ ಇದನ್ನು ಸಾಧಿಸಬಹುದು.

 2 ಸಲಿಂಗಕಾಮ : ಇದು ಗಂಡಸರು ಗಂಡಸರಲ್ಲಿ, ಹೆಂಗಸರು ಹೆಂಗಸರಲ್ಲಿ ಅನುರಕ್ತರಾಗಿ ಲೈಂಗಿಕತೃಪ್ತಿ ಪಡೆಯುವ ಕಾಮವಿಕಾರದ ಸಾಮಾನ್ಯ ಹೆಸರು. ಜನಸಾಮಾನ್ಯರಲ್ಲಿ ಬಹುಪಾಲು ಜೀವಮಾನದ ಒಂದಲ್ಲ ಒಂದು ಸಮಯದಲ್ಲಿ ಸಲಿಂಗಕಾಮದ ಅನುಭವವನ್ನು ಆಕಸ್ಮಿಕವಾಗಿಯಾದರೂ ಪಡೆದಿರುತ್ತಾರೆ. ತಾರುಣ್ಯಕ್ಕೆ ಬರುವ ಹೊತ್ತಿಗೆ ಹುಡುಗರು (ಸ್ಪಲ್ಪ ಕಡಿಮೆ ಪ್ರಮಾಣದಲ್ಲಿ ಹುಡುಗಿಯರು) ಒಟ್ಟಿಗೇ ಮುಷ್ಟಿಮೈಥುನದಂಥ ಸಮರತಿಯ ಅಂದರೆ ಸಲಿಂಗರತಿಯ ಚಟುವಟಿಕೆಗಳಲ್ಲಿ ತೊಡಗುವುದು ಅಪರೂಪವಲ್ಲ. ಹಾಸ್ಟೆಲುಗಳಲ್ಲಿ, ಜೈಲುಗಳಲ್ಲಿ ಹಡಗಿನಲ್ಲಿ, ಕಾನ್ವೆಂಟುಗಳಲ್ಲಿ ಸಲಿಂಗಕಾಮ ಚಟುವಟಿಕೆ ಹೆಚ್ಚೆಂಬುದು ಸ್ಪಷ್ಟವಾಗಿರುವ ಅಂಶ. ಆದರೆ ಈ ಚಟುವಟಿಕೆಗಳು ಅವಶ್ಯವಾಗಿಯೇ ವಿಕೃತವೇನಲ್ಲ. ಏಕೆಂದರೆ ಮುಂದೆ ಇವರಿಗೆ ಸಹಜ ಸಂಭೋಗದಲ್ಲಿ ಜುಗುಪ್ಸೆಯೇನಿರುವುದಿಲ್ಲ. ಆದರೆ ಸಲಿಂಗಕಾಮ ಕಾಮ ತೃಪ್ತಿಯ ಏಕೈಕ ವಿಧಾನವಾದಾಗ ಮತ್ತು ವ್ಯಕ್ತಿಗೆ ವಿಲಿಂಗಕಾಮದಲ್ಲಿ ತೊಡಗುವುದು ಅಸಾಧ್ಯವಾದಾಗ ವಿಕೃತವೆನಿಸಿಕೊಳ್ಳುತ್ತದೆ.

 ಪುರುಷ ಸಲಿಂಗಕಾಮಿಗಳಲ್ಲಿ ಕೆಲವರು ಲೈಂಗಿಕಚಟುವಟುಕೆಯಲ್ಲಿ ಗಂಡಸಿನಂತೆ ಪ್ರಧಾನವಾದ ಪಾತ್ರವಹಿಸಿದರೆ ಇನ್ನುಳಿದವರು ಹೆಂಗಸರು ಪಾತ್ರವಹಿಸುತ್ತಾರೆ. ಸಾಮಾನ್ಯವಾಗಿ ಸಲಿಂಗಕಾಮಿಗಳಾದ ಇಬ್ಬರು ಗಂಡಸರು ಬೇರೆ ಬೇರೆ ವಯಸ್ಸಿನವರಾಗಿದ್ದಾಗ ಹೆಚ್ಚು ವಯಸ್ಸಾದ ವ್ಯಕ್ತಿ ಪ್ರಾಧಾನವಾದ ಪಾತ್ರವಹಿಸುತ್ತಾನೆ. ಹೆಚ್ಚು ಕಡಿಮೆ ಇದೇ ಬಗೆಯ ವರ್ತನೆ ಸಲಿಂಗಕಾಮಿಗಳಾದ ಹೆಂಗಸರಲ್ಲೂ ಕಂಡುಬರುತ್ತದೆ. ಒಬ್ಬಾಕೆ ಗಂಡಸಿನಂತೆಯೂ ಇನ್ನೊಬ್ಬಾಕೆ ಹೆಂಗಸಿನಂತೆಯೂ ಲೈಂಗಿಕ ಕ್ರಿಯೆಯಲ್ಲಿ ಪಾಲ್ಗೊಳ್ಳಬಹುದು. ತೋರಿಕೆಗೆ ಕೆಲವು ಸಲಿಂಗಕಾಮಿಗಳು ಎಲ್ಲರಂತೆಯೇ ಇರಬಹುದಾದರೂ ಅನೇಕರು ಮಾನಸಿಕವಾಗಿ ಮತ್ತು ಶಾರೀರಕವಾಗಿ ಪರಲಿಂಗದ ವ್ಯಕ್ತಿಗಳನ್ನೇ ಹೆಚ್ಚು ಹೋಲುತ್ತಾರೆ.

 ಸಲಿಂಗಕಾಮದ ಕಾರಣಗಳು ಅಸ್ಪಷ್ಟವಾಗಿ ಆನುವಂಶಿಕವಾಗಿ ಪಡೆದ ದೇಹ, ಚಿತ್ತಪ್ರಕೃತಿಗಳ ದೋಷದಿಂದಾಗಿ ಅನೇಕರು ಸಲಿಂಗಕಾಮಿಗಳಾಗುತ್ತಾರೆಂದು ಕೆಲವು ಸಂಶೋಧಕರು ಪ್ರತಿಪಾದಿಸಿದ್ದಾರೆ. ಮಾನಸಿಕವಾಗಿ ಮತ್ತು ಶಾರೀರಕವಾಗಿ ಸಲಿಂಗಕಾಮಿಗಳು ಪರಲಿಂಗದವರ ಲಕ್ಷಣಗಳನ್ನು ಪಡೆದಿರುವುದು ಜನಿಕ (ಜೀನು) ದೋಷವನ್ನು ಸೂಚಿಸುತ್ತದೆಂದು ಭಾವಿಸಲಾಗಿದೆ. ಏಕೆಂದರೆ ಗಂಡಸುತನ ಅಥವಾ ಹೆಂಗಸುತನವನ್ನು ಯಾವುದೇ ಒಂದು ನಿರ್ದಿಷ್ಟ ಜನಿಕ ಪೂರ್ತಿಯಾಗಿ ನಿರ್ಧರಿಸಿ ಬಿಡುವುದಿಲ್ಲ ; ಅನೇಕ ಜನಿಕಗಳ ಸಮತೋಲತೆ ಅದನ್ನು ನಿರ್ಧರಿಸುತ್ತದೆ. ಈ ಸಮತೋಲ ಸಾಧ್ಯವಾಗದೆ ಹೋದಾಗ ವ್ಯಕ್ತಿಯೊಬ್ಬನಲ್ಲಿ ಯಾವುದೇ ಒಂದು ಲಿಂಗದ ಲಕ್ಷಣಗಳು ಪ್ರಧಾನವಾಗಿ, ಉಳಿದವು ಹತ್ತಿಕ್ಕಲ್ಪಡದೆ ತೋರಿಕೆಗೆ ಆತ ಗಂಡಸಾಗಿದ್ದರೂ ಆಂತರಿಕವಾಗಿ ಹೆಂಗಸಾಗಿರುವ ಸ್ಥಿತಿಯುಂಟಾಗಬಹುದು. ಇದು ಮುಖ್ಯವಾಗಿ ಜೀವವಿಜ್ಞಾನದ ಧೋರಣೆಯನ್ನು ತಳೆದವರ ವಿಚಾರವಾಗಿದೆ. ಆದರೆ ಇನ್ನು ಕೆಲವು ಸಂಶೋಧಕರು ಮಾನಸಿಕ ಅಂಶಗಳ ಪ್ರಾಮುಖ್ಯವನ್ನು ಒತ್ತಿಹೇಳಿದ್ದಾರೆ. ಸಹಜವಾದ ವ್ಯಕ್ತಿತ್ವದ ಬೆಳೆವಣಿಗೆಯಲ್ಲಿ ಹೆಣ್ಣುಮಕ್ಕಳು ತಾಯಿಯಲ್ಲಿಯೂ ಗಂಡು ಮಕ್ಕಳು ತಂದೆಯಲ್ಲಿಯೂ ತಾದಾತ್ಮ್ಯ ಹೊಂದಬೇಕಾಗುತ್ತದೆ. ಆದರೆ ಸಲಿಂಗಕಾಮಿಗಳಾದ ಗಂಡಸರು ಚಿಕ್ಕಂದಿನಲ್ಲಿ ತಾಯಿಯಲ್ಲಿ, ಹೆಣ್ಣುಮಕ್ಕಳು ತಂದೆಯಲ್ಲಿ ತಾದತ್ಮ್ಯ ಹೊಂದಿರುತ್ತಾರೆ. ಇದೇ ತೊಂದರೆಯ ಮೂಲ ಎಂಬುದು ಕೆಲವರು ಅಭಿಪ್ರಾಯ. ಈ ರೀತಿ ದೋಷಪೂರ್ಣ ತಾದಾತ್ಮ್ಯ ಅಥವಾ ಕಲಿಕೆಯಿಂದ ಪರಲಿಂಗದ ಮಾನಸಿಕ ಲಕ್ಷಣಗಳನ್ನೇ ಒಳಗೊಳ್ಳುತ್ತಾ ಹೋಗುವ ಸಾಧ್ಯತೆ ಇದೆ. ಅಲ್ಲದೆ ಇನ್ನೂ ಕೆಲವು ಸನ್ನಿವೇಶಗಳು ಮಗುವಿನ ಸಹಜವಾದ ಮನೋಲೈಂಗಿಕ ಬೆಳೆವಣಿಗೆಗೆ ಅಡ್ಡಬರಬಹುದು. ಉದಾಹರಣೆಗೆ ಗಂಡು ಮಕ್ಕಳನ್ನು ಮಾತ್ರ ಪಡೆದ ತಾಯ್ತಂದೆಗಳು, ಹೆಣ್ಣು ಹುಟ್ಟಬೇಕೆಂದು ತುಂಬಾ ಆಸೆ ಪಡುವವರು. ಕೊನೆಗೆ ನಿರಾಶರಾಗಿ ತಮ್ಮ ಗಂಡು ಮಗುವೊಂದನ್ನೇ ಹುಡುಗಿಯಂತೆ ಅಲಂಕರಿಸಿ ಹುಡುಗಿಯಂತೆಯೇ ನಡೆಸಿಕೊಳ್ಳುವುದರಿಂದ ಅವನ ಮನೋಲೈಂಗಿಕ ಬೆಳೆವಣಿಗೆ ತೊಂದರೆಗೀಡಾಗುತ್ತದೆ. ಕೊನೆಯದಾಗಿ ನವತಾರುಣ್ಯದ ವಯಸ್ಸಿನಲ್ಲಿ ಆಕಸ್ಮಿಕವಾಗಿ ಪಡೆದ ಸಲಿಂಗಕಾಮದ ಅನುಭವದಲ್ಲಿ ತೃಪ್ತಿಕಂಡಾತ ಮುಂದೆ ಈ ಮೂಲಕವೇ ತನ್ನ ಕಾಮವನ್ನು ತೃಪ್ರಿಪಡಿಸಿಕೊಳ್ಳುವ ಚಟಕ್ಕೆ ಇಳಿಯಬಹುದು ; ಇಂಥವರಲ್ಲಿ ಸಲಿಂಗಕಾಮ ಆಕಸ್ಮಿಕವಾದ ಅಪಕಲಿಕೆಯ ಪರಿಣಾಮವಾಗಿರುತ್ತದೆ. ಬಹುಶಃ ಎಲ್ಲ ಸಲಿಂಗಕಾಮಿಗಳಲ್ಲೂ ಇಂಥ ಕಲಿಕೆಯ ಅಂಶ ಇದ್ದೇ ಇದೆ ಎಂದು ಭಾವಿಸಲು ಕಾರಣಗಳಿವೆ.

 ಸಲಿಂಗಕಾಮಿಗಳ ಚಿಕಿತ್ಸೆ ತುಂಬ ಕಠಿಣವಾದದ್ದಾಗಿದೆ. ಸಾಂಪ್ರದಾಯಿಕವಾದ ಮಾನಸಿಕ ಚಿಕಿತ್ಸೆಯಿಂದ ಹೇಳಿಕೊಳ್ಳುವಂಥ ಪ್ರಯೋಜನ ಕಂಡುಬಂದಿಲ್ಲ. ಇತ್ತೀಚಿಗೆ ಪ್ರವರ್ಧಮಾನಕ್ಕೆ ಬರುತ್ತಿರುವ ಪ್ಯಾವ್‍ಲವ್‍ನ ಅನುಬಂಧನೆಯ ಸೂತ್ರಗಳನ್ನು ಆಧರಿಸಿದ ವರ್ತನ ಚಿಕಿತ್ಸೆಯಿಂದ ತಕ್ಕಮಟ್ಟಗಿನ ಪ್ರಯೋಜನವಾಗಿದೆ. ಇದರಲ್ಲಿ ಸಲಿಂಗಕಾಮದ ಸನ್ನಿವೇಶವನ್ನು ವ್ಯಕ್ತಿಯ ಮನಸ್ಸಿನಲ್ಲಿ ಕಲ್ಪನೆಯ ಮೂಲಕ ಅಥವಾ ಅಂಥ ಚಿತ್ರಗಳ ಮೂಲಕ ಕೆರಳಿಸಿ ಆಗ ವಿದ್ಯುದಾಘಾತ ಕೊಡುವುದರಿಂದ ಸಲಿಂಗಕಾಮದ ಅನುಭವಕ್ಕೂ ತಾಪಕ್ಕೂ ಒಂದು ಅನುಬಂಧನೆಯನ್ನು ಉಂಟುಮಾಡಲಾಗುತ್ತದೆ. ಈ ಅನುಬಂಧಿತ (ಕಂಡಿಷನ್ಡ್) ತಾಪ ಅವರ ದುಶ್ಚಟವನ್ನು ಹತ್ತಿಕ್ಕಲು ಸಮರ್ಥನಾಗುತ್ತದೆ ಸಲಿಂಗಕಾಮ ಒಂದು ಶಾರೀರಕ ರೋಗವಲ್ಲವಾದ್ದರಿಂದ ಇದಕ್ಕೆ ಔಷಧಗಳಿಲ್ಲ.

 3 ಕದ್ದು ನೋಡುವಿಕೆ : ಚಿಕ್ಕವಯಸ್ಸಿನವರು ದೊಡ್ಡವರ ಲೈಂಗಿಕ ಚಟುಚಟಿಕೆಗಳಲ್ಲಿ ಕುತೂಹಲ ತಳೆಯುವುದು ಸಹಜ. ಕದ್ದು ನೋಡುವುದು ಯಾವಾಗಲೂ ವಿಕೃತವಾದದ್ದು ಎಂದು ಹೇಳಲಾಗದು. ಆದರೆ ಹೆಂಗಸರು ಬಟ್ಟೆ ಕಳಚುತ್ತಿರುವಾಗ ಅಥವಾ ಇತರರು ಲೈಂಗಿಕ ಚಟುವಟಿಕೆಯಲ್ಲಿ ತೊಡಗಿರುವಾಗ ವಯಸ್ಸಾದ ದೊಡ್ಡವರು ಹಣಿಕಿನೋಡುವುದು ಹತ್ತಿಕ್ಕಿಕೊಳ್ಳಲಾಗದ ಚಟವಾಗಿ ಅದೇ ಅವರ ಕಾಮತೃಪ್ತಿಯ ಮುಖ್ಯಕ್ರಮವಾದಾಗ ಅದು ವಿಕೃತವೆನಿಸಿಕೊಳ್ಳುತ್ತದೆ. ಶುದ್ಧರೂಪದಲ್ಲಿ ಈ ಅಭ್ಯಾಸ ಕಾಣಿಸಿಕೊಳ್ಳುವುದು ಕಡಿಮೆ; ಇನ್ನಿತರ ಮನೋಬೇನೆಗಳು ಜೊತೆಗೂಡಿರುವುದು ಸಾಮಾನ್ಯ. ಮನೋವೈದ್ಯಕೀಯ ಸಾಹಿತ್ಯದಲ್ಲಿ ಈ ಸಂಗತಿಗಳು ಸ್ವಲ್ಪ ವಿರಳವೇ. ಅಭಾವವೇ ಇಂಥ ನಡೆವಳಿಕೆಗೆ ಮುಖ್ಯ ಕಾರಣವೆನ್ನಬಹುದು. ಸ್ತ್ರೀಗೆ ಪುರುಷನಿಗೆ, ಸ್ತ್ರೀಯ ಸಾಮೀಪ್ಯ ಸಂಬಂಧಗಳು ಹೆಚ್ಚು ಹೆಚ್ಚಾಗಿ ಒದಗುವಂತೆ ಮಾಡುವುದರಿಂದ ಇಂಥ ಚಟ ಅಶ್ಲೀಲವಾದ್ದೆನ್ನುವ ಅಭಿಪ್ರಾಯವನ್ನು ಬೇರೂರಿಸುವುದರಿಂದ ಈ ಕೆಟ್ಟ ಚಾಳಿಯನ್ನು ಸ್ವಲ್ಪ ಮಟ್ಟಿಗೆ ಬಿಡಿಸಬಹುದು.

 4 ಪ್ರದರ್ಶನಾತಿರೇಕ : ಇದು ಗಂಡಸರಲ್ಲಿ ಮಾತ್ರ ಕಂಡುಬರುವ ಕಾಮ ವಿಕಾರ. ಎಲ್ಲರಲ್ಲೂ ಕಂಡುಬರುವ ಸ್ವಪ್ರದರ್ಶನ ಭಾವವೇ ಇದರ ತಳಹದಿಯಾಗಿರಬಹುದಾದರೂ ಇದು ಲೈಂಗಿಕ ಕ್ಷೇತ್ರಕ್ಕೆ ಸೀಮಿತಗೊಂಡು, ಉತ್ಪ್ರೇಕ್ಷಿತವಾಗಿ, ಸಾರ್ವಜನಿಕವಾಗಿ ಕಿರಿಕಿರಿಯಾಗಬಹುದು. ಈ ವಿಕಾರಕ್ಕೆ ಒಳಗಾದ ವ್ಯಕ್ತಿ ಸಾರ್ವಜನಿಕ ಸ್ಥಳಗಳಲ್ಲಿ ತನ್ನ ಜನನೇಂದ್ರಿಯವನ್ನು ಪ್ರದರ್ಶಿಸಿಕೊಳ್ಳುವುದರಿಂದ ಲೈಂಗಿಕತೃಪ್ತಿಯನ್ನು ಪಡೆಯುತ್ತಾನೆ. ಇಂಥ ವ್ಯಕ್ತಿ ಸಾಮಾನ್ಯವಾಗಿ ಬೀದಿಯ ಕತ್ತಲೆ ಮೂಲೆಯಲ್ಲಿ, ಉದ್ಯಾನಗಳಲ್ಲಿ ಸಂದಿ ಗೊಂದಿಗಳಲ್ಲಿ ಕಾಣದಂತೆ ಅರೆಬೆತ್ತಲೆಯಾಗಿದ್ದು, ಹೊಂಚಿಕಾದು, ಹೆಂಗಸರು ಯಾರಾದರೂ ಆ ಕಡೆ ಸುಳಿದಾಗ ಥಟ್ಟನೆ ಬೆಳಕಿಗೆ ಜಿಗಿದು ತನ್ನ ಜನನೇಂದ್ರಿಯವನ್ನು ಪ್ರದರ್ಶಿಸುತ್ತಾನೆ. ಕೆಲವೊಮ್ಮೆ ಕೂಡಲೇ ಮುಷ್ಟಿಮೈಥುನ ಮಾಡಿಕೊಳ್ಳುತ್ತಾನೆ. ಸಾರ್ವಜನಿಕ ಸ್ಥಳಗಳಲ್ಲಿ ಈ ರೀತಿ ಅಶ್ಲೀಲವಾಗಿ ವರ್ತಿಸುತ್ತಾರೆಂಬ ಕಾರಣದಿಂದ ಇಂಥವರು ಜೈಲಿಗೆ ಹೋಗುವುದು ಸಾಮಾನ್ಯ. ಆದರೆ ಈ ಬಗೆಯ ಶಿಕ್ಷೆಯಿಂದ ಪ್ರದರ್ಶನಾತಿರೇಕವನ್ನು ನಿವಾರಿಸಲು ಸಾಧ್ಯವಿಲ್ಲ. ಅಲ್ಲದೆ ಈ ತೊಂದರೆ ಕೂಡ ಸಾಂಪ್ರದಾಯಿಕ ಮನೋಚಿಕಿತ್ಸೆಯಿಂದ ಗುಣವಾಗುವುದು ಕಷ್ಟ. ಬಹುಶಃ ಕಾಮತೃಪ್ತಿಗೆ ಬೇಕಾದ ಸಹಜ ಸೌಲಭ್ಯಗಳನ್ನು ಕೊಟ್ಟಲ್ಲಿ ಕ್ರಮೇಣ ಇಂಥವರ ಪ್ರದರ್ಶನ ಮನೋಭಾವ ಕಡಿಮೆಯಾದೀತು.

 5 ವಸ್ತು ಕಾಮ : ವಸ್ತುಕಾಮವೆಂದರೆ ಸಾಮಾನ್ಯವಾಗಿ ಪರಲಿಂಗದ ವ್ಯಕ್ತಿಗಳು ಉಪಯೋಗಿಸುವ ಒಂದಲ್ಲ ಒಂದು ವಸ್ತುವೇ ಕಾಮೋದ್ರೇಕಕ್ಕೆ ಕಾರಣವಾಗುವುದು. ವಸ್ತುಕಾಮಿಗಳಾದ ಹಲವರು ಎಂದಿನಂತೆ ಲೈಂಗಿಕ ಕ್ರಿಯೆಯಲ್ಲಿ ತೊಡಗಬಹುದಾದರೂ. ಈ ವಸ್ತುವಿನ ಪ್ರಚೋದನೆಯಿದ್ದಾಗ ಮಾತ್ರ ಅವರಿಗದು ಸಾಧ್ಯವಾಗುತ್ತದೆ. ಆದರೆ ಇನ್ನು ಕೆಲವರಲ್ಲಿ ಕಾಮಿತವಸ್ತುವಿನ ಮೇಲೆ ಎರಗಿಬೀಳುವುದೇ ಲೈಂಗಿಕ ಕ್ರಿಯೆ ಬದಲಿ ಚಟುವಟಿಕೆಯಾಗಿಬಿಡುತ್ತದೆ. ಉದಾಹರಣೆಗೆ ಹೆಂಗಸರ ಕೈಚೀಲವನ್ನು ಕಂಡರೆ ಕಾಮೋದ್ರಿಕ್ತನಾಗುವ ವ್ಯಕ್ತಿ ಚೀಲ ಹಿಡಿದು ಬೀದಿಯಲ್ಲಿ ಹೊರಟ ಹೆಂಗಸಿನ ಮೈಮೇಲೆರಗಿ ಆಕೆಯ ಚೀಲವನ್ನು ಕಸಿದುಕೊಂಡು ಅದನ್ನು ನಾಶಮಾಡುವುದರಿಂದ ತನ್ನ ಕಾಮೋದ್ರೇಕವನ್ನು ತಣಿಸಿಕೊಳ್ಳಬಹುದು. ಇಷ್ಟು ತೀವ್ರಸ್ಥಿತಿಗೆ ಹೋಗಿರದ ವಸ್ತುಕಾಮಿಗಳು ಹೆಂಗಸಿನ ಉಡುಪೊಂದನ್ನು ಉದಾಹರಣೆಗೆ ರವಿಕೆಯೊಂದನ್ನು ಧರಿಸಿಕೊಂಡು ಸಂಭೋಗಕ್ಕೆ ಸಿದ್ಧರಾಗಬಹುದು. ಹೆಚ್ಚುಕಡಿಮೆ ಇದಕ್ಕೆ ವಿರುದ್ಧವಾದ ವಸ್ತುಕಾಮ ಪ್ರವೃತ್ತಿಯನ್ನು ಕಡಿಮೆ ಪ್ರಮಾಣದಲ್ಲಿ ಹೆಂಗಸರಲ್ಲೂ ಕಾಣಬಹುದು. ಹೆಂಗಸರ ಒಳ ಉಡುಪುಗಳು, ಚಪ್ಪಲಿಗಳು. ಕೈಚೀಲಗಳು, ಉಣ್ಣೆಯ ಬಟ್ಟೆ ಇತ್ಯಾದಿ ಸಾಮಾನ್ಯವಾಗಿ ವಸ್ತುಕಾಮಿ ಗಂಡಸರಲ್ಲಿ ಕಾಮೋದ್ರೇಕವನ್ನುಂಟು ಮಾಡುವ ಪದಾರ್ಥಗಳಾಗಿವೆ. ಪ್ರಾರಂಭದ ಲೈಂಗಿಕ ಅನುಭವಗಳು ಪದಾರ್ಥಗಳನ್ನು ಹೀಗೇ ಆಕಸ್ಮಿಕವಾಗಿ ಒಳಗೊಂಡಾಗ ಕಾಮೋದ್ರೇಕಕ್ಕೂ ಆ ಪದಾರ್ಥಗಳಿಗೂ ಅನುಬಂಧನೆ ಉಂಟಾಗಬಹುದು; ಮುಂದೆ ಆ ಪದಾರ್ಥಗಳೇ ಲೈಂಗಿಕ ಚಟುವಟಿಕೆಗೆ ಪ್ರಚೋದನೆಯಾಗಬಹುದು. ವಸ್ತುಕಾಮವನ್ನು ಈಗ ವರ್ತನ ಚಿಕಿತ್ಸೆಯಿಂದ ನಿವಾರಿಸುವ ಸಾಧ್ಯತೆ ಕಂಡುಬಂದಿದೆ. ವ್ಯಕ್ತಿಯಲ್ಲಿ ಕಾಮೋದ್ರೇಕ ಮಾಡುವ ವಸ್ತುಗಳನ್ನೊಳಗೊಂಡ ಸನ್ನಿವೇಶವನ್ನು ಕಾಲ್ಪನಿಕವಾಗಿ ಅಥವಾ ವಾಸ್ತವಿಕವಾಗಿ ಸೃಷ್ಟಿಸಿ, ಆಗ ವಿದ್ಯುದಾಘಾತ ಕೊಡುವ ವಿಧಾನ ಬಳಕೆಗೆ ಬರುತ್ತಿದೆ.

 6 ಬದಲುಡಿಗೆ : ಪರಲಿಂಗಿಗಳಿಗೆ ಉಚಿತವಾದ ಉಡುಪನ್ನು ಧರಿಸುವ ವಿಕಾಸವೇ ಬದಲುಡಿಗೆ. ಬದಲುಡಿಗೆ ಮತ್ತು ವಸ್ತುಕಾಮ ಕೆಲವೊಮ್ಮೆ ಒಂದೇ ವ್ಯಕ್ತಿಯಲ್ಲಿ ಕಾಣಿಸಿಕೊಳ್ಳಬಹುದು. ಆದರೆ ಅನೇಕರಲ್ಲಿ ಬದಲುಡಿಗೆ ತಾನೇ ತಾನಾಗಿ ಉಳಿಯಬಹುದಾದ ವಿಕಾರವಾಗಿದೆ. ಹೆಂಗಸರಲ್ಲಿಗಿಂತ ಗಂಡಸರಲ್ಲಿ ಇದು ಹೆಚ್ಚು. ಈ ತೊಂದರೆಗೀಡಾದ ಗಂಡಸರು ತಾವು ಹೆಂಗಸರೆಂದು ದೃಢವಾಗಿ ನಂಬಿಕೊಂಡಿರುತ್ತಾರೆ ; ಕೆಲವೊಮ್ಮೆ ಇವರ ಈ ನಂಬಿಕೆ ಬ್ರಾಂತಿ ಎನಿಸಿಕೊಳ್ಳುವ ಮಟ್ಟಕ್ಕೂ ಹೋಗುತ್ತದೆ. ಹಾಗಾಗಿ ಹೆಂಗಸರ ಉಡುಪನ್ನು ಧರಿಸಿದಾಗ ಇವರಿಗೆ ಹಾಯೆನಿಸಿ ಗಂಡಸರ ಉಡುಪಿನಲ್ಲಿ ಮುಜುಗುರ ಉಂಟಾಗುತ್ತದೆ. ವಸ್ತುಕಾಮದಲ್ಲಿ ಆಗುವಂತೆ ಹೆರರುಡಿಗೆಯನ್ನು ಧರಿಸಿದಾಗ ಕಾಮೋದ್ರೇಕ ಆಗಬೇಕೆಂದೇನೂ ಇಲ್ಲ. ಇದೇ ವಸ್ತುಕಾಮಕ್ಕೂ ಬದಲುಡಿಗೆಗೂ ಇರುವ ಮುಖ್ಯ ವ್ಯತ್ಯಾಸ. ಶಸ್ತ್ರಚಿಕಿತ್ಸೆಯ ಸಹಾಯದಿಂದ ಲಿಂಗಪರಿವರ್ತನೆ ಬಯಸುವ ಬಹುಮಂದಿ ಬದಲುಡಿಗೆಯ ವಿಕಾರಕ್ಕೆ ಒಳಗಾದವರಾಗಿರುತ್ತಾರೆ. ಹೆಂಗಸಾಗಿ ಪರಿವರ್ತನೆ ಹೊಂದಬೇಕೆಂದು ಬಯಸಿ ಆದರೆ ಅದು ಸಾಧ್ಯವಾಗದೆ ಹೋದಾಗ ಕೆಲವು ಗಂಡಸರು ತಮ್ಮ ಜನನೇಂದ್ರಿಯವನ್ನೇ ಹತಾರೆಯಿಂದ ವಿರೂಪಗೊಳಿಸಿಕೊಂಡಿರುವುದುಂಟು. ಆದರೆ ಲಿಂಗಾಂತರಗೊಳ್ಳಬೇಕೆಂಬ ತೀವ್ರವಾದ ಬಯಕೆ ಇಲ್ಲದ ಬದಲುಡಿಗೆಗಾರರಿಗೆ ಈಗ ಮಾನಸಿಕ ವಿಧಾನಗಳಿಂದ ಚಿಕಿತ್ಸೆ ನೀಡುವುದು ಸಾಧ್ಯವಿದೆ.

 7 ಪರಹಿಂಸಕಾಮ ಮತ್ತು ಸ್ವಹಿಂಸಕಾಮ : ಲೈಂಗಿಕವಾಗಿ ಹಿಂಸೆಯ ಮೂಲಕವೇ ಅಭಿವ್ಯಕ್ತಿ ಪಡೆಯುವುದು ಈ ಎರಡೂ ವಿಕಾರಗಳ ಮುಖ್ಯ ಅಂಶವಾಗಿದೆ. ಬೇರೆಯವರನ್ನು ವಿಧವಿಧವಾಗಿ ಹಿಂಸಿಸುವುದರ ಮೂಲಕವೇ ಲೈಂಗಿಕ ತೃಪ್ತಿಪಡೆಯುವುದು ಪರಹಿಂಸಕಾಮ. ತನ್ನನ್ನೇ ಅದೇ ಬಗೆಯ ಹಿಂಸೆಗೆ ಒಳಪಡಿಸಿಕೊಳ್ಳುವುದು ಸ್ವಹಿಂಸಕಾಮ. ಸಾಮಾನ್ಯವಾಗಿ ಸ್ವಹಿಂಸಕಾಮಿ ತನ್ನನ್ನೇ ತಾನು ಹಿಂಸಿಸಿಕೊಳ್ಳುವುದಿಲ್ಲ ; ಬದಲು ಪರಹಿಂಸಕಾಮಿಯೊಬ್ಬನ ಚಿತ್ರಹಿಂಸೆಗೆ ಖುಷಿಯಿಂದ ತನ್ನನ್ನೆ ಒಳಪಡಿಸಿಕೊಂಡು ಆ ಮೂಲಕ ಲೈಂಗಿಕ ತೃಪ್ತಿ ಅನುಭವಿಸುತ್ತಾನೆ. ಆದ್ದರಿಂದ ಸಾಧಾರಣವಾಗಿ ಪರಹಿಂಸಕಾಮಿಗಳು ಮತ್ತು ಸ್ವಹಿಂಸಕಾಮಿಗಳು ಜೊತೆ ಜೊತೆಯಾಗುತ್ತಾರೆ. ಸ್ವಹಿಂಸಕಾಮಿಯನ್ನು ಬೆತ್ತಲೆಗೊಳಿಸಿ ಪರಹಿಂಸಕಾಮಿ ಚಾಟಿಯಿಂದ ಹೊಡೆಯುವುದು, ಜನನೇಂದ್ರಿಯವನ್ನು ಗಾಸಿಗೊಳಿಸುವುದು ಸಾಮಾನ್ಯವಾದ ವಿಧಾನ. ಇದರಿಂದ ಹೊಡೆಯುವಾತ ಮತ್ತು ಹೊಡಿಸಿಕೊಳ್ಳುವವಳು (ಕೆಲವೊಮ್ಮೆ ಹೊಡೆಸಿಕೊಳ್ಳುವವನು) ಇಬ್ಬರೂ ಸಂಭೋಗದ ಸುಖವನ್ನೇ ಅನುಭವಿಸುತ್ತಾರೆ. ಆದರೆ ಕೆಲವು ಸಾರಿ ಪರಹಿಂಸಕಾಮಿಗೆ ಹೊಡೆಸಿಕೊಳ್ಳಲು ಖುಷಿಯಾಗಿ ಒಪ್ಪಿಕೊಳ್ಳುವ ಸ್ವಹಿಂಸಕಾಮಿ ಸಿಗದೆ ಇದ್ದಾಗ ಅವನ ಚಾಟಿಯ ಏಟಿಗೆ ಕೈಗೆ ಸಿಕ್ಕುವ ಆರೋಗ್ಯವಂತರಾದ ಅಸಹಾಯಕರು ಬಲಿಯಾಗಬಹುದು. ಕೊಲೆಗಡುಕರಲ್ಲಿ ಕೆಲವರಾದರೂ ಪರಹಿಂಸಕಾಮಿಗಳೆಂದು ಅಂದಾಜುಮಾಡಲಾಗಿದೆ. ತಾರುಣ್ಯದಲ್ಲೇ ಹಸು, ಎಮ್ಮೆ ನಾಯಿ ಇತ್ಯಾದಿ ಅಸಹಾಯಕ ಸಾಧುಪ್ರಾಣಿಗಳನ್ನು ಕಂಬಕ್ಕೆ ಕಟ್ಟಿ ಸುಮ್ಮನೆ ಹೊಡೆದು ಹಿಂಸಿಸುವುದರಲ್ಲಿ ಸಾಕಷ್ಟು ಸಮಯ ಕಳೆಯುವ ಹುಡುಗರನ್ನು ಅಲ್ಲಿ ಇಲ್ಲಿ ಕಾಣಬಹುದು. ಇವರಲ್ಲಿ ಕೆಲವರಲ್ಲಾದರೂ ಇದು ಪರಹಿಂಸಕಾಮದ ಮೊದಲ ಸೂಚನೆಯಾಗಿರಬಹುದು. ತಾಯ್ತಂದೆಗಳು ಇಂಥ ಮಕ್ಕಳನ್ನು ಪರಿಣತರಿಗೆ ತೋರಿಸುವುದು ಒಳ್ಳೆಯದು.

 ಇತರ ಬಗೆಗಳು : ಅಷ್ಟೊಂದು ತೀವ್ರವಲ್ಲದ ಅಥವಾ ಅಪರೂಪವಾದ ಇನ್ನು ಕೆಲವು ಕಾಮವಿಕಾರಗಳಿವೆ. ಸಂಭೋಗಪೂರ್ವಸ್ಖಲನ ಉದ್ವಿಗ್ನತೆಯ ಚಿಹ್ನೆ ; ಇದು ಸಾಮಾನ್ಯವಾದ ಆದರೆ ತೀವ್ರವಲ್ಲದ ಕಾಮವಿಕಾರ, ಪ್ರಾಣಿ ಸಂಭೋಗ ಅಪೂರ್ವವಾಗಿ ಆದರೆ ಮುಖ್ಯವಾಗಿ ಬುದ್ಧಿಮಾಂದ್ಯವಿರುವವರಲ್ಲಿ ಕಂಡುಬರುವ ವಿಕಾರ. ಬಾಲ ಸಂಭೋಗ ವಯಸ್ಸಾದ ಕೆಲವರು ಮಕ್ಕಳನ್ನು ದುರುಪಯೋಗಪಡಿಸಿಕೊಳ್ಳುವುದು.

 ಚಿಕಿತ್ಸೆ : ಒಟ್ಟಿನಲ್ಲಿ ಕಾಮವಿಕಾರಗಳ ಚಿಕಿತ್ಸೆ ಕಷ್ಟದ ಸಮಸ್ಯೆಯಾಗಿದೆ. ಈ ಮೇಲಿನವು ಯಾವುದೂ ಸಾಂಪ್ರದಾಯಿಕ ಅರ್ಥದಲ್ಲಿ ರೋಗಗಳಲ್ಲ. ಕೆಲವರಲ್ಲಿ ಕಾಮವಿಕಾರ ಇನ್ನಿತರ ಮಾನಸಿಕ ತಾರುಮಾರಿನ ಒಡನಾಡಿಯಾಗಿರಬಹುದು. ಕಾಮ ವಿಕಾರಗಳು ಮೂಲತಃ ಶಾರೀರಕ ರೋಗಗಳಲ್ಲವಾದ್ದರಿಂದ ಇದನ್ನು ವೈದ್ಯಕೀಯ ಚಿಕಿತ್ಸೆಯಿಂದ ನಿವಾರಿಸುವುದು ಸಾಧ್ಯವಿಲ್ಲ. ಸಾಂಪ್ರದಾಯಿಕವಾದ ಮನೋಚಿಕಿತ್ಸೆ (ಸೈಕೋತೆರಪಿ) ಕೂಡ ಸುಮಾರಾಗಿ ಮಾತ್ರ ಪರಿಣಾಮಕಾರಿ. ಆದರೆ ಕಲಿಕೆಯ ನಿಯಮಗಳನ್ನಾಧರಿಸಿದ ವರ್ತನ ಚಿಕಿತ್ಸೆಯಿಂದ (ಬಿಹೇವಿಯರ್ ತೆರಪಿ) ತಕ್ಕಮಟ್ಟಿಗಿನ ಯಶಸ್ಸನ್ನು ಪಡೆಯಲಾಗಿದೆ.   

(ಎಂ.ಎನ್.ಎಚ್.)